ಪೋಸ್ಟ್‌ಗಳು

ಮಾರ್ಚ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಕ್ಕಿ ಗೂಡಿಗೆ ಮರಳಿದೆ

ಕಡಲು ದಾಟಿ ದೂರ ಹಾರಿದೆ ಹೊಸ ಹಕ್ಕಿ, ಹೊಸ ಕನಸು ಕಟ್ಟಲು, ಹೊಸ ಗೂಡು ಹುಡುಕಲು, ಹಸಿದ ಹೊಟ್ಟೆ ಹೊರೆಯಲು, ಜಗವು ಹೊಸತಾಗಿದೆ, ಬಲು ಸುಂದರವಾಗಿದೆ, ಹಳೆಯ ಗೂಡು ಹಳತಾಗಿದೆ, ತಾಯಿ ಬೇರು ಸಡಿಲಾಗಿದೆ, ಕೈಯ ತುತ್ತು ಮರೆತಾಗಿದೆ, ಹಣದ ಬೆನ್ನು ಹತ್ತಿದೆ, ಕರುಳ ಕರೆ ಕೇಳಿಸದೆ, ಬಹಳ ಕಾಲವಾಗಿದೆ. ಹೊಸ ಗೂಡು ದೊರಕಿದೆ, ರಥವು ಕೈ ಸೇರಿದೆ, ಹೃದಯ ರಾಗ ಹಾಡಿದೆ, ಲಾಲಿ ಹಾಡು ಕೇಳಿದೆ.. ಊರ ದಾರಿ ಮರೆತಿದೆ,  ಇಲ್ಲೇ ಸುಖವಾಗಿದೆ, ಸ್ವರ್ಗ ಬಳಿಯೆ ಬಂದಿದೆ, ಅದು ತಾನಾಗಿಯೇ ಕಾದಿದೆ. ಸುಖದ ನೆರಳ ಬಾನಲಿ, ಕಾರ್ಮೋಡ ಕವಿದಿದೆ, ಕರೋನಾ ಮಾರಿ ಕಾಡಿದೆ, ಊರ ನೆನಪಾಗಿದೆ. ಕೆಲಸ ಹೊರಟು ಹೋಗಿದೆ, ಕೈ ಖಾಲಿಯಾಗಿದೆ, ಆರೋಗ್ಯ ಮೂಲೆ ಸೇರಿದೆ, ಬದುಕು ಬಂಧನವಾಗಿದೆ. ಮುತ್ತು ಜಾರಿ ಹೋಗಿದೆ, ಕೈ ತುತ್ತು ನೆನಪಾಗಿದೆ, ಬೇರೆ ದಾರಿ ಕಾಣದೆ, ಹಕ್ಕಿ ಊರ ದಾರಿ ಹಿಡಿದಿದೆ. ತಾಯಿ ನೆಲದ ಘಮಲು, ಮೂಗಿಗೆ ತಾಗಲು, ಹೊಸ ಹುರುಪು ಬಂದಿದೆ, ಎಲ್ಲ ನೋವು ಮರೆಸಿದೆ. ಹೆತ್ತ ಒಡಲು ತಣಿಸಿದೆ, ಕಣ್ಣೀರ ಕಡಲು ಹರಿದಿದೆ, ಹೇಳಲು ಪದವಿಲ್ಲದೆ, ಜೀವ ಒದ್ದಾಡಿದೆ. ಕೈ ತುತ್ತು ದೊರಕಿದೆ, ಒಲವ ನೋಟ ಜೊತೆಗಿದೆ. ಜೀವ ಹಗುರಾಗಿದೆ, ನಿದ್ದೆ ಜೋಂಪು ಹತ್ತಿದೆ. ಹಕ್ಕಿ ಬೆಳಗ ಸಾರಿದೆ, ಹಸಿರು ಗದ್ದೆ ಕರೆದಿದೆ, ಹಾರೆ ಕತ್ತಿ ಕೈ ಸೇರಿದೆ, ದುಡಿದು ತಿನುವ ಮನಸ್ಸಾಗಿದೆ. ಹೊಟ್ಟೆ ತುಂಬಾ ಅನ್ನವು, ಮನಸು ತುಂಬಾ ಪ್ರೀತಿಯು, ಅದರ ಒಳಗೆ ಶಾಂತಿಯು, ಕಣ್ಣು ತುಂಬಾ ನಿದ್ದೆಯು, ಪರಿಶುದ್...

ನಾನಿನ್ನು ಮರೆತಿಲ್ಲ

ನಾನಿನ್ನೂ ಮರೆತಿಲ್ಲ, ಅತ್ತಾಗ ಹೆಗಲಾದವರನು, ಬಿರುಬಿಸಿಲಿಗೆ ನೆರಳಾದವರನು, ಕಲ್ಲುಮುಳ್ಳಿನ ದಾರಿಯಲ್ಲಿ ಜತೆ ನಡೆದವರನು, ಒಳಿತು ಬಯಸಿದವರನು, ಕತ್ತಲಲಿ ದಾರಿತೋರಿದವರನು, ತಿದ್ದಿ ಬುದ್ಧಿ ಹೇಳಿದವರನು, ವಿದ್ಯೆಯ ಧಾರೆ ಎರೆದವರನು, ತಾನು ಕರಗಿ ನನಗೆ ನೀರೆರೆದವರನು, ಕಣ್ಣಲ್ಲಿ ಕಣ್ಣಿಟ್ಟು ಕಾದವರನು, ನನಗಾಗಿ ಜೀವನವನು ತೇದವರನು , ನಿಮ್ಮೆಲ್ಲರ ಋಣಭಾರವಿದೆ, ಅದರ ಜತೆ ಭಾರವಾದ ಹೃದಯವೂ.! ನಾನಿನ್ನೂ ಮರೆತಿಲ್ಲ, ಅಪವಾದ ಹೋರಿಸಿದವರನು, ಬೆನ್ನಹಿಂದೆ ಆಡಿಕೊಂಡವರನು, ನಂಬಿಕೆಗೆ ಮೋಸಮಾಡಿದವರನು, ಬೆನ್ನಿಗೆ ಚುಚ್ಚಿದವರನು, ಕಣ್ಣೀರಿಗೆ ಕಾರಣರಾದವರನು, ಕುಹಕದ ನಗು ನಕ್ಕವರನು, ತಟ್ಟೆಗೆ ಕೈಯಿಕ್ಕಿದವರನು, ಭರಿಸಲಾಗದ ನೋವಿದೆ, ಜತೆಗೆ ಭಾರವಾದ ಹೃದಯವೂ.! ನಾನಿನ್ನೂ ಮರೆತಿಲ್ಲ, ಓ ದೇವರೇ, ನೀನು ಕಾಯುವೆಯೆಂದು, ನೀನು ಲೆಕ್ಕದಲ್ಲಿ ಪಕ್ಕ, ಪಾಪ ಪುಣ್ಯಗಳ ಕೊಡವು ತುಂಬಿದ ಮೇಲೆ, ನೀನು ಕಾಯುವುದಿಲ್ಲ, ಅರೆಕ್ಷಣವೂ, ಕೊಡುವುದೆಲ್ಲವ ಕೊಡುವೆ ಅಸಲು ಸಮೇತ, ಕಾಯಬೇಕಿದೆ ಅಷ್ಟೇ ತಾಳ್ಮೆಯಿಂದ, ನಂಬಿಕೆಯ ತೊರೆದಿಲ್ಲ, ನಾನಿನ್ನೂ ಮರೆತಿಲ್ಲ, ನೀನು ಜತೆಗಿರುವೆಯೆಂದು,  ನಾನಿನ್ನೂ ಮರೆತಿಲ್ಲ...