ಬಾಳ ದಾರಿಯಲ್ಲಿ

ಪಡೆದ ಜನ್ಮ ಸಾರ್ಥಕವಾಗುವಂತೆ,
ದುಡಿದುಡಿದು ಸವೆದು,
ಹರಿವ ಬೆವರ ಹನಿಗಳ,
ತೃಪ್ತಿಯಿಂದ ಒರೆಸಿ,
ತಂಗಳನ್ನವನೂ ಮನಪೂರ್ತಿ ಹಂಚಿ ತಿಂದು,
ಕಣ್ತುಂಬ ನಿದ್ದೆ, ಪರಿಪೂರ್ಣ ಆರೋಗ್ಯ,
ಅತ್ತು, ನಕ್ಕು ಹಗುರಾಗಿ,
ನೂರು ವರುಷ ಬಾಳಿದರು
ನಮ್ಮ ಹಿರಿಯರು.

ಆಡಲು ಮಾತಿಲ್ಲದೆ,
ಅಳಲು ಮನಸಿಲ್ಲದೆ,
ನಗಲು ಕಾರಣವಿಲ್ಲದೆ,
ಕೇಳಲು ಸಮಯವಿಲ್ಲದೆ,
ಕುಂಟು ನೆಪಗಳ ಆಸರೆಯಲಿ,
ಕೊರಗಿ ಕರಗುತ್ತಾ ಬೇಯುವ ನಾವು,
ಮನದಿ ಚಟಗಳ ದಾಸರಾಗಿ, 
ನಮ್ಮನ್ನೇ ನಾವು ಮರೆತು,
ದೇಹ ರೋಗರುಜಿನಗಳ ತಾಣವಾಗಿ,
ಕಾಣದ ಕಡಲಿಗೆ ಹಂಬಲಿಸುವ ನಾವು,
ಗುರಿಯಿಲ್ಲದ ದೋಣಿಯ ಪಯಣಿಗರು.

ಇಂದು ಬದಲಾಗಬೇಕಿದೆ ಬದುಕಿಗಾಗಿ,
ಮತ್ತೆ ಮರಳಬೇಕಿದೆ ಇತಿಹಾಸದೊಳಗೆ,
ಮರೆತಿರುವ ವಿಜ್ಞಾನ ಹೊಸದಾಗಿ ಬರಲಿ,
ಬದುಕಿನ ಲೆಕ್ಕಕ್ಕೆ ಇತಿಮಿತಿಯು ಇರಲಿ,
ತಪ್ಪಿರುವ ಎದೆತಾಳ ಸಮನಾಗಿ ನಿಲಲಿ,
ತಪ್ಪಿರುವ ಹೆಜ್ಜೆಗಳು ನಿಜಹದಕೆ ಸಾಗಲಿ,

ತುಸು ನಿಂತು, ನಸುನಕ್ಕು ಸಾಂತ್ವನವ ಹೇಳೋಣ, 
ಕಿವಿಗಳನು ಅಗಲಿಸುತ, ಹೃದಯ ಭಾರವನು ಇಳಿಸೋಣ,
ಕಾಯಕದ ಕೈಲಾಸ ನಿಜಸೂತ್ರ ಅರಿಯೋಣ,
ಶರಣಾಗಿ ಬಾಳಿದರೆ ಸುಖವಿಹುದು ಎನ್ನೋಣ,
ಹದವರಿತು ಉಣ್ಣುವುದ ಹೊಸದಾಗಿ ಕಲಿಯೋಣ,
ಸುಖನಿದ್ದೆ ಬಳಿಬರಲು ಕಾಯಿಸದೆ ಮಲಗೋಣ,
ಆರೋಗ್ಯಭಾಗ್ಯವನು ಮುದ್ದಾಗಿ ಪಡೆಯೋಣ,
ಮರಳೋಣ ಮರಳೋಣ ಬದುಕಿಗೆ ತೆರಳೋಣ,
ಹಳೆದಾರಿ ಹೊಸನೋಟ ಹಸಿರು ಉಸಿರಾಗಿರಲಿ,
ಕಣ್ತೆರೆದು, ಮನ ತೆರೆದು, ನಗು ನಗುತ ಬದುಕೋಣ, ನಗು ನಗುತ ಬದುಕೋಣ.


ಕಾಮೆಂಟ್‌ಗಳಿಲ್ಲ:

ಅಮ್ಮನಲ್ಲದೇ ಬೇರಾರು?

ಹೆತ್ತ ತಾಯಿ ದೇವಕಿಗಿಂತ, ಮಿಗಿಲಾಗಿಯೇ ಸಲಹಿದಳು, ಆ ತಾಯಿ ಯಶೋದೆ, ಅಮ್ಮನೆಂಬ ಹೆಸರಿಗೆ ಅವಳು, ಅನ್ವರ್ಥವೆ ಆದವಳು. ಕುಂತಿ ಹೆತ್ತ ಮಗುವನ್ನು, ಜಗಕೆ ಹೆದರಿ ತ್ಯಜಿಸಿದಳು....