ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತುಸು ನಗಲು

ಕಲಿತ ವಿದ್ಯೆಯ ಮರೆತು, ಕೋಟಿ ವಿದ್ಯೆಯ ಕಲಿತು, ಬದುಕಿನ ಸಾಗರದಿ ಈಜು ಕಲಿಯುತ್ತಾ, ಬಂದ ಅಲೆಯ ಜೊತೆ ಒಂದಾಗಿ, ತೇಲುತ್ತ ಮುಳುಗುತ್ತ , ಕನಸಿನ ಹರಿಗೋಲು ಹಿಡಿದು, ಸೋಲದಾ ಛಲದಲಿ, ಮುಂದೆ ಸಾಗುವಳು, ದಣಿವು ಮರೆತು. ಕರುಳ ಬಳ್ಳಿಗಳ ನೆರಳು ತಾನಾಗಿ, ತುಸು ಬಾಡದಂತೆ, ನೀರು ಗೊಬ್ಬರವುಣಿಸಿ, ಎಲ್ಲೆಲ್ಲೋ ಹರಡದಂತೆ, ಊರುಗೋಲನು ಕೊಟ್ಟು, ಮನತುಂಬ ಆಸೆ, ನಂಬಿಕೆಯಿಟ್ಟು  ಭರವಸೆಯ ನಾಳೆಗಾಗಿ, ಹಗಲುಗನಸುಗಳ ಕಾಣುತ್ತಾ, ಅದ ನಿಜವಾಗಿಸುವ ಭರದಲ್ಲಿ , ಮರೆತಿಹಳು ಹಗಲು ರಾತ್ರಿಗಳ.. ಅತ್ತರೂ ಅಳದಂತೆ , ನಗದಿದ್ದರೂ ನಗುತ್ತಿರುವಂತೆ, ಖುದ್ದು ನಟಿಸುವ ಅವಳು, ಮಹಾನಟಿಯಲ್ಲ, ಹಣಕಾಗಿ ನಟಿಸುವುದೂ ಅಲ್ಲ, ತನ್ನವರಿಗಾಗಿ, ನೋವ ನುಂಗಿದವಳು, ಹೊತ್ತು ಹೆತ್ತವರ ಋಣವ ಮರೆಯದ, ಪಣವ ತೊಟ್ವವಳು. ಎಲ್ಲ ಜಂಜಡದಲ್ಲಿ, ಮರೆತಿಹಳೆ ತನ್ನ ತಾನು, ಇಲ್ಲ ಹಾಗೇನಿಲ್ಲ, ಸಮಯ ಹುಡುಕುವಳು, ತನಗಾಗಿ ತಾನು, ಬಳಲಿ ಬೆಂಡಾದಾಗ, ಒಂದು ನಿಟ್ಟು ಸಿರು ಬಿಡಲು, ಬಿಡುವಾದ ಕಿವಿಗೆ ಆಕಾಶವಾಣಿಯ ಕಲರವ ಕೇಳಿಸಲು, ಮನದ ಭಾರವ ಲೇಖನಿಗೆ ಹೇಳಲು, ಕೆಲಸದ ಜೊತೆ ಮನೋರಂಜಿಸಲು, ಕಲಿತಿದ್ದಾಳೆ ತನ್ನನ್ನು ತಾನೇ ಸಂತೈಸಲು, ನೋವು ಮರೆತು  ನಗಲು, ತುಸು ನಗಲು....

ತಾಳ್ಮೆ

ಕಡಿದಷ್ಟೂ ಚಿಗುರುವ ಮರದ, ಮರೆಯದ ತಾಳ್ಮೆ, ತೆಗೆದಷ್ಟೂ ಕಟ್ಟುವ ಜೇಡನ ಮುಗಿಯದ ತಾಳ್ಮೆ, ಎಸೆದ ಕಸವನ್ನು ಮೇಲಕ್ಕೆಸೆಯುವ ಸಾಗರದ ತಾಳ್ಮೆ, ತೆಗೆದಷ್ಟು ಮತ್ತೆ ಜೇನು ಕೂಡಿಸುವ, ಜೇನಿನ ತಾಳ್ಮೆ, ಕಸ ಕಡ್ಡಿ ಸೇರಿಸಿ ಗೂಡು ಕಟ್ಟುವ ಹಕ್ಕಿಯ ತಾಳ್ಮೆ, ಅಗೆದರೂ, ತುಳಿದರೂ ಕೋಪಿಸದ ಭೂಮಿಯ ತಾಳ್ಮೆ, ಅತ್ತರೂ, ಹೊಡೆದರೂ ಮುನಿಯದ ಮಾತೆಯ ತಾಳ್ಮೆ, ಹೆಗಲೇರಿದರೂ, ಮುಗಿಲ ಕೇಳಿದರೂ, ಬೇಡವೆನ್ನದ ಅಪ್ಪನ ತಾಳ್ಮೆ, ಅರಿತು ಕೇಳಿದರೂ, ಅರಿಯದೆ ಕೇಳಿದರೂ ವಿವರಿಸುವ ಗುರುವಿನ ತಾಳ್ಮೆ, ಕಲಿಯಬೇಕಿದೆ ಮಗುವೇ, ಸದಾ ನಗುವ ಒಲವ ತಾಳ್ಮೆ, ಅಂತರಂಗವ ಅರಿವ ತಾಳ್ಮೆ, ಸರಿ ತಪ್ಪುಗಳ ತಿಳಿವ ತಾಳ್ಮೆ, ಗೌರವಿಸುವ ಮೊದಲ ತಾಳ್ಮೆ, ಹಂಚಿ ತಿನುವ , ನಿಜದ ತಾಳ್ಮೆ, ಶರಣು ಎನುವ ಶರಣರ ತಾಳ್ಮೆ, ಸೋತು ಗೆಲ್ಲುವ ನಿತ್ಯ ತಾಳ್ಮೆ, ತನ್ನ ತಾನು ಮರೆತ ಯೋಧನ ತಾಳ್ಮೆ, ತಾಳುತ ಬಾಳುವುದೇ ನಿಜದ ಮೇಲ್ಮೆ, ತಿಳಿ ನೀನಿದರ ಗೆಲ್ಮೆ.. ತಿಳಿ ನೀನದರ ಮೇಲ್ಮೆ.

ಜಾಣ ಕಿವುಡು

ಹೇಳಿದ್ದು ಕೇಳಲು ಒಲವಿಲ್ಲದರಿಗೆ, ಕೇಳಿದರೂ ಉತ್ತರಿಸಲು ಇಚ್ಚೆಯಿಲ್ಲದರಿಗೆ, ಹೇಳಲು ಉತ್ತರವೇ ಇಲ್ಲದವರಿಗೆ, ಕೇಳಿ ಕೇಳಿ ಸುಸ್ತಾದವರಿಗೆ, ಕೇಳಿದ್ದನ್ನು ಈಡೇರಿಸಲಾಗದವರಿಗೆ, ಸತ್ಯ ಹೇಳಲಾಗದರಿಗೆ, ತಲೆಯಲ್ಲಿ ಯೋಚನೆ ತುಂಬಿದವರಿಗೆ, ಬಹುದೊಡ್ಡ ವರದಾನ, ಈ ಜಾಣ ಕಿವುಡು. ಮತ್ತೆ ಮತ್ತೆ ಹೇಳಲು ಸಮಯವಿಲ್ಲದವರಿಗೆ, ಹೇಳಿದ್ದೇ ಹೇಳುವ ತಾಳ್ಮೆಯಿಲ್ಲದರಿಗೆ, ಸ್ವಾಭಿಮಾನಿಯಾದ ಗುಣವುಳ್ಳರಿಗೆ, ಕಾಯಲಾಗದ ಅಸಹಾಯರಿಗೆ, ಅರ್ಥಮಾಡಿಸುವ ಒಲವಿಲ್ಲದವರಿಗೆ, ಬಲು ದೊಡ್ಡ ಶಾಪ ಈ ಜಾಣ ಕಿವುಡು. ಅದೇನು ಹುಟ್ಟಿನಿಂದ ಬಂದಿದೆಯೋ, ಅದನ್ನು ಅವರೆಲ್ಲಿ ಕಲಿತರೋ ? ಕಿವಿಗೆ ಏನು ಹೊಕ್ಕಿದೆಯೋ, ಇವರದು ದಪ್ಪ ಚರ್ಮವೋ, ಕಿವಿ ಕೇಳುವುದೇ ಇಲ್ಲವೋ, ಈ ಕಲ್ಲು ಬಂಡೆಯ ಹತ್ತಿರ, ಮಾತಾಡಿ ಏನು ಫಲ, ಎಂದು ಬಯ್ಯದೆ ಇರುವರೆ ಯಾರಾದರೂ? ಮಾಡಲು ಕೆಲಸವಿಲ್ಲ, ಅರಿಯಲು ಬುದ್ಧಿಯಿಲ್ಲ ಎಷ್ಟು ವಟಗುಟ್ಟುತ್ತಾರೆ ಇವರು, ತಲೆ ಕೆಟ್ಟು ಹೋಗಿದೆ ಇವರ ಮಾತು ಕೇಳಿ, ಇರಲಿ, ಇವರಿಗೆ ಕಲಿಸಬೇಕು ಎಂದು, ಮೌನವ್ರತ ಮಾಡುವವರು,  ಬಯ್ಯಬಹುದು ಒಳಗಿನಿಂದ, ಮತ್ತೆ ಒಳಗೊಳಗೇ ನಗುತ್ತಿರಬಹುದು, ತಮ್ಮ ಜಾಣ ಕಿವುಡಿಗೆ. ಅವರಿಗೆ ಅವರು ಸರಿ, ಇವರಿಗೆ ಇವರು ಸರಿ, ಹೇಳುವುದು ಯಾರು? ಯಾವುದು ಸರಿ? ಅವರಿವರ, ಇವರವರ, ಅರಿತು ಬಾಳಿದರೆ ಆಗುವುದು ಎಲ್ಲ ಸರಾಸರಿ. ಆಗುವುದು ಎಲ್ಲ ಸರಾಸರಿ...

ಎಲ್ಲಿಗೆ ಈ ಪಯಣ?

ಎಲ್ಲಿಗೆ ಈ ಪಯಣ? ಮುಗಿಯದ ಈ ಕದನ, ಕಾಡಿದೆ ಈ ಕವನ, ಮರುಗಿದೆ ಕವಿಮನ, ಅರೆಬಟ್ಟೆ, ಮುರಿದ ಮನೆ, ಹಸಿದ ಕಂಗಳು, ಉರಿದಿದೆ ಸಂಸಾರದ ಸಂಸ್ಕಾರ, ಉಳಿದುದು ಬರಿ ತಿರಸ್ಕಾರ. ಒಂದೆಡೆ ಮೆರೆಯುವ, ಮೈಮರೆಯುವ, ಲಾಲಸೆಯ, ಸುಖ ಬಯಸುವ, ನಿಯಮವಿರದ, ಅಂಕೆ ಮೀರಿದ, ಸುಂಕವಿಲ್ಲದ ನಡತೆ. ಇನ್ನೊಂದೆಡೆ ಮರುಗುವ, ಕರಗುವ, ನೀತಿಗಂಜುವ, ನಿಯಮ ಮೀರದ, ಚಿಪ್ಪಿನೊಳಗೆ ಅಡಗಿಕೊಳ್ಳುವ,  ಬಲಿಪಶುವಿನ ಒಡಲ ಉರಿ. ಅವರಿಗೆ ಬೇಕಾಗಿದೆ ಸುಖ, ಅವಳಿಗಿಲ್ಲಿ ಮುಗಿಯದ ಶೋಕ, ನ್ಯಾಯ ದೊರೆವುದೇ ಇಲ್ಲಿ, ಅವಳ ಕಾಯುವಿಕೆಯಲ್ಲಿ. ಪರರಿಗೆ ಹೇಳುವ ನೀತಿ ಅನ್ವಯಿಸದೆ ಅದೆ ರೀತಿ, ಯಾರು ತಿಳಿವರು ಇದರ ಶ್ರುತಿ ಅವರಿಗಿಲ್ಲ ಯಾರ ಭೀತಿ. ಹೀಗೆ ನಡೆದರೆ ಬಾಳುವ ರೀತಿ ಎಲ್ಲಿಗೆ ಮುಟ್ಟುವುದೊ ಈ ವಿಕೃತಿ, ಯಾರಿಗೂ ತಿಳಿದಿಲ್ಲ, ಕದ್ದು ಮುಚ್ಚಿ ಹಾಲು ಕುಡಿಯುವ ಬೆಕ್ಕಿನ ಚೆಲ್ಲಾಟ. ಆಸೆ ಮುಗಿಯುವ ತನಕ ವಯಸ್ಸು ಮೀರುವ ತನಕ, ಕಾಲ ಕರೆಯುವ ತನಕ, ಕಾಯಬೇಕೆನು? ಬಿಡದೆ ತಾನು? ಹಾಗೊಮ್ಮೆ ಹೀಗೊಮ್ಮೆ, ಹೊಯ್ದಾಡುತ್ತ ಸಾಗುವ ಮನಸಿಗೆ, ಕಣ್ಣೀರ ಸಾಂತ್ವಾನ, ತುಸು ನೆಮ್ಮದಿಯ ನಿದ್ದೆ, ಮರೆಯದೆ ಕೊಟ್ಟಿರುವ, ಕರುಣಾಳು ದೇವರಿಗೆ, ಮರೆತು ಶರಣಾಗುವುದ, ಮರೆತಿಲ್ಲ ಅವಳು, ತೊರೆದಿಲ್ಲ ಅವಳು...