ತಾತ

ಕಳೆದು ಹೋದ ನಿನ್ನೆಗಳ,
ನೆನಪುಗಳ ತಡಕಿದರೆ,
ಭಾರವಾದ ನಿಟ್ಟುಸಿರೊಂದು
ಆಸರೆಯಾಗುತ್ತದೆ.
ಆಲದ ಮರದ ಆಳವಾದ 
ಬೇರುಗಳು ನೆನಪಿನಂಗಳದಲ್ಲಿ 
ಜೋಕಾಲಿಯಾಡುತ್ತದೆ.

ಹೊಣೆಗಾರಿಕೆಯ ಭಾರಕ್ಕೆ ಬಾಗಿದ ಬೆನ್ನಿನ
ಹಣ್ಣಾಗಿ ಮಾಗಿದ ಬೆಳ್ಳಿ ಕೂದಲಿನ 
ಊರಗಲ ಬೊಚ್ಚು ಬಾಯಗಲಿಸಿ
ಮಗುವಿನಂತೆ ನಗುವ ಆ ಕರ್ಣನ
ಆಲದಾ ಮರದಂತೆ ಜಗದಗಲ ಚಾಚಿ
ತನ್ನ ಚಾಚುವಿಕೆಯ ಕೆಳಗೆ ನೆರಳಾಗಿ 
ಬೆಳಕನ್ನು ಚೆಲ್ಲಿ, ಎಳೆತರುಗಳಿಗೆ
ಆಸರೆಯಾದ  ಹಿರಿಮರದಂತೆ,
ಬಾಯಾರಿದವರ ದಾಹ ಇಂಗಿಸುವ,
ಸದ್ದಿಲ್ಲದೆ ಹರಿವ ಗುಪ್ತಗಾಮಿನಿ,
ಈ ಮುದ್ದು ತಾತ.

ಎಲ್ಲ ಎಳೆಯರು ಕರೆದು 
ಸುತ್ತ ಸೇರಿಸಿಕೊಂಡು, ಕಡಲೆ ಬೇಕೇ, ಕಾಳು ಬೇಕೇ ಎನ್ನುತ್ತ , ರಾಮಾಯಣ,  ಭಾರತದ 
ಕತೆಗಳನು ತಿರು ತಿರುವಿ ಹೇಳುತ್ತ,
ಕಾಲು ಎಳೆಯುತ್ತ, ಬುದ್ಧಿ ಹೇಳುತ್ತ,
ಕಥೆಯ ಹೆಣೆಯುತ್ತ, ತಪ್ಪು ತಿದ್ದುತ್ತ 
ಕತ್ತಲದಾರಿಯಲ್ಲಿ ಜ್ಞಾನ ದೀಪವ
ಹಚ್ಚಿದವರು ಈ ಮುದ್ದು ತಾತ.

ಬಾಳೆಲ್ಲವೂ ತಾನು ದೀಪದ ಬತ್ತಿಯಂತೆ
ಉರಿದು, ಸುತ್ತೆಲ್ಲ ಬೆಳಕು ಬೀರಿ,
ಒಮ್ಮೆ ದ್ರೋಣನಂತೆ ಗುರುವಾಗಿ,‌
ಇನ್ನೊಮ್ಮೆ ಏನೂ ಅರಿಯದ ಮಗುವಾಗಿ, 
ವಾಮನರೂಪದ ತ್ರಿ ವಿಕ್ರಮನಾಗಿ,
ದಶಾವತಾರ ತೋರಿದ ತಾತ,
ಅನಾಯಾಸೇನ ಮರಣಂ,
ವಿನಾ ದೈನ್ಯೇನ ಜೀವನಂ ಮಾತಿನಂತೆ,
ಮಾತಿಲ್ಲದೆ ಮೌನಕ್ಕೆ ಜಾರಿ ಹೋದರು,
ಕನಸಲ್ಲೂ ಕಾಡುವ ಮುದ್ದು ತಾತ..






ಕಾಮೆಂಟ್‌ಗಳಿಲ್ಲ:

CBSC ಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...