ಗುರು ವಂದನೆ-1

ನಮ್ಮ ಬಾಳಲ್ಲಿ ಹಲವು ಗುರುಗಳು ಬಂದಿರುತ್ತಾರೆ. ಹಾಗೆಂದು ಅವರೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವರು ಮಾತ್ರ ಸದಾಕಾಲ ಮನದಾಳದಲ್ಲಿ ಬೆಳಗುವ ನಂದಾ ದೀಪದಂತೆ, ನಿರಂತರವಾಗಿರುತ್ತಾರೆ. ಸದಾ ಕಾಡುವ ಅವರಿಗೆ ಸಣ್ಣದೊಂದು ನುಡಿ ನಮನ.

ವಲಿಂಡನ ಅಮ್ಮ

ಮೂರನೇ ತರಗತಿಯ ಕ್ಲಾಸ್ ಟೀಚರ್ ಅವರು.
ಪ್ರೀತಿಯಿಂದ ಪಾಠ ಕಲಿಸಿದ ಒಳ್ಳೆಯ ಶಿಕ್ಷಕಿ ಅವರು. ಮೊದಲ ಪರೀಕ್ಷೆ ಮುಗಿದಾಗ ತರಗತಿಗೆ ನಾಲ್ಕನೇ ಸ್ಥಾನ. ಕಲಿಕೆಯಲ್ಲಿ ಸಾದಾರಣವಾಗಿದ್ದ ನಾನು, ಖುಷಿಯಾಗಿಯೇ ಇದ್ದೆ. ಆದರೆ, ಆ ದಿನ ಟೀಚರ್ ಹೇಳಿದ ಮಾತು ಇಂದೂ ನೆನಪಿದೆ. ನಿನ್ನ ಅಣ್ಣ ಕ್ಲಾಸಿಗೆ ಫಸ್ಟ್ ಅಂತೆ, ನೀನು ಪ್ರಯತ್ನ ಮಾಡು, ಕ್ಲಾಸಿಗೆ ಫಸ್ಟ್ ಬಾ ಎಂದಿದ್ದರು. ಅವರ ಬಾಯಿ ಹರಕೆಗೋ, ನನ್ನ ಪ್ರಯತ್ನಕ್ಕೋ ಗೊತ್ತಿಲ್ಲ, ಮುಂದಿನ ಪರೀಕ್ಷೆಯಲ್ಲಿ ಕ್ಲಾಸಿಗೆ ಫಸ್ಟ್. ನನಗಿಂತ ಹೆಚ್ಚು ಅವರೇ ಸಂತಸ ಪಟ್ಟವರು ಅವರು. ಮುಂದಿನ ತರಗತಿಗೆ ಹೋದರೂ ಆಗಾಗ ಸಿಕ್ಕಾಗ ಚೆನ್ನಾಗಿ ಓದು ಎನ್ನುತ್ತಿದ್ದರು. ಆ ಶಾಲೆಯಿಂದ ಬೇರೆ ಕಡೆ ಹೋದರೂ, ಸಿಕ್ಕಾಗ ಹೇಗಿದ್ದಿ? ಓದು ಹೇಗಿದೆ ಎಂದು ವಿಚಾರಿಸುತ್ತಿದ್ದರು.

ಪದವಿ ಮುಗಿಸಿ, ಹತ್ತಿರದ ಶಾಲೆಯಲ್ಲಿ ಟೀಚರಾಗುವ ಅವಕಾಶ ಸಿಕ್ಕಿತು. ಆಗ ಭೇಟಿಯಾದಾಗ ಅವರ  ಖುಷಿಗೆ ಪಾರವೇ ಇರಲಿಲ್ಲ. ಇವಳು ನನ್ನ ವಿದ್ಯಾರ್ಥಿನಿ ಎಂದು ಎಲ್ಲರಿಗೂ ಪರಿಚಯಿಸುತ್ತಿದ್ದರು. ಅವರ ಪ್ರೀತಿ ಕಾಳಜಿಗೆ ಸರಿಸಾಟಿಯೇ ಇಲ್ಲ.

ನಾನೀಗ ಕಲಿತ ಶಾಲೆಯಿಂದ ಬಲು ದೂರದಲ್ಲಿದ್ದೇನೆ. ಅವರು ಕೆಲಸದಿಂದ ನಿವೃತ್ತರಾಗಿರಬಹುದು. ಅವರ ನೆನಪು ಮಾತ್ರ ಹಸಿರಾಗಿಯೇ ಇದೆ. ನನಗೊಂದು ನೋವಿದೆ. ಅವರ ಹೆಸರೇನೆಂದು ತಿಳಿದಿಲ್ಲ. ಆದರೆ ಅವರಿಗೆ ವಲಿಂಡ ಎಂಬ ಹೆಸರಿನ ಮಗಳಿದ್ದಳು. ಅದಕ್ಕೆ ಅವರು ವಲಿಂಡನ ಅಮ್ಮ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಮ್ಮನಾಗುವುದು ಎಂದರೆ

ಮಾರ್ಜಾಲ ಮಾಯೆ

ಜಾಣ ಕಿವುಡು