ದಾನಶೂರ

ಸೂರ್ಯಪುತ್ರನಾಗಿ ಜನಿಸಿ,
ಸೂತಪುತ್ರನೆಂದು ಕರೆಸಿಕೊಂಡ,
ಕ್ಷತ್ರಿಯಕುಲದಲ್ಲಿ ಜನಿಸಿ,
ಹೀನಕುಲದವನೆಂದೆನಿಸಿಕೊಂಡ,
ಹೆತ್ತವರಿದ್ದರೂ ಅನಾಥನಾದ,
ಹಿರಿಯ ಮಗನಾಗಿ ವಂಶದ ರಾಜನಾಗಿ,
ಮೆರೆಯಬೇಕಾದವ, ಗೌರವಿಸಬೇಕಾದವ,
ಶತೃವಾದ, ಪರಮಶತೃವಾದ.
ತಾನು ಮಾಡದ ತಪ್ಪಿಗೆ, ಹುಟ್ಟಿನಿಂದಲೇ ಬಲಿಯಾದ ಕರ್ಣ, ಒಬ್ಬ ನತದೃಷ್ಟ.

ವಿದ್ಯೆ ಕಲಿಯುವ ಕನಸಿಗೆ ,
ಅಡ್ಡಿಯಾಯಿತು ಅವನ ಕುಲ,
ಸುಳ್ಳು ಹೇಳಿದ ಅವನಿಗೆ,
ದೊರೆಯಲಿಲ್ಲ ವಿದ್ಯೆಯ ಬಲ,
ದೊರೆತದ್ದು ಶಾಪದ ಫಲ,
ಆದರೂ ಅವ ಬಿಡಲಿಲ್ಲ ಛಲ.

ಆಸರೆಯಾದ ಕೌರವೇಂದ್ರ,
ಅವನ ಮೇಲಿನ ಪ್ರೀತಿಗೋ,
ಅಥವಾ ಕರುಣೆಗೋ,
ಅವನ ಸಾಮರ್ಥ್ಯ ನೋಡಿಯೋ, 
ಅರ್ಜುನನ ಪ್ರತಿಸ್ಪರ್ದಿಯಾಗಿಸಲೋ,
ಎಂದು ಕರ್ಣ ಕೇಳಲಿಲ್ಲ,
ಬದಲು ಋಣಿಯಾದ,
ಬದುಕು ಕೊಟ್ಟ ಗೆಳೆಯನಿಗೆ.

ಕೈಹಿಡದ ನಂಬಿಕೆಯ ಮುರಿಯಲಿಲ್ಲ,
ಕೊಟ್ಟ ಮಾತನು ತಪ್ಪಲಿಲ್ಲ,
ಅನ್ನದಾ ಋಣ ಮರೆಯಲಿಲ್ಲ,
ಒಡಹುಟ್ಟುಗಳ ಕೊಲ್ಲಲಿಲ್ಲ ,
ದಾನವನ್ನು ತೊರೆಯಲಿಲ್ಲ,
ತನಗಾಗಿ ಏನನು ಬಯಸಲಿಲ್ಲ,

ಭೂಮಿಯನ್ನು ಕೊಟ್ಟುಬಿಟ್ಟ,
ಹುಟ್ಟುಕವಚವ ತೆಗೆದು ಕೊಟ್ಟ,
ಕರ್ಣಕುಂಡಲ ಕೊಟ್ಟು ಕೆಟ್ಟ,  
ತೊರೆದ ಮಾತೆಗೆ ,ಮಾತು ಕೊಟ್ಟ,
ತೊಟ್ಟಬಾಣವ ಮರಳಿ ತೊಡದ,
ಪಣವ ತೊಟ್ಟ, 
ಅರಿತು ಅರಿತು ಮರೆತೆ ಬಿಟ್ಟ,
ತನ್ನ ಒಳಿತನು ಮರೆತು ಬಿಟ್ಟ.

ಸೋತು ಗೆದ್ದ ವೀರನಾದ,
ಮಾತು ತಪ್ಪದ ದೀರನಾದ,
ಹೆಗಲು ನೀಡುವ ಗೆಳೆಯನಾದ,
ಎಲ್ಲ ಕ್ಷಮಿಸುವ ಜ್ಞಾನಿಯಾದ,
ತಿಳಿದೂ ತಿಳಿದೂ ಮೌನಿಯಾದ,
ಅವನು ಮರೆಯದ ಶೂರನಾದ,
ಯಾರೂ ಮರೆಯದ ದಾನಶೂರನಾದ!.








ರೈತನ ಬದುಕು

ಸೂರ್ಯೋದಯವಾಗಿದೆ, ಭೂಮಿ ಬೆಳಕಾಗಿದೆ.  
ಹೂವು ಅರಳಿ ನಗುತಿದೆ, ಹೊಸ ಗಂಧ ಚೆಲ್ಲಿದೆ.
ಕಾಯಿ ಹಣ್ಣಾಗಿದೆ, ಅದು ಯಾರಿಗಾಗಿಯೋ ಕಾದಿದೆ.
ಕೋಗಿಲೆ ಕುಹೂ ಹಾಡಿದೆ, ತನ್ನ ಪ್ರಿಯನ ಕರೆದಿದೆ.
ನವಿಲು ಗರಿಬಿಚ್ಚಿ ಕುಣಿದಿದೆ, ಅದು ಹೆಣ್ಣ ಸೆಳೆದಿದೆ.

ಮಳೆಗಾಲ ಬಂದಿದೆ, ಹೊಸ ಹುರುಪ ತಂದಿದೆ,
ಭೂಮಿ ಹಸಿರಾಗಿದೆ, ಹೊಸ ವಿಷಯ ಹೇಳಿದೆ.
ಗಾಳಿ ಜೋರು ಬೀಸಿದೆ, ಮರವು ತೂಗಿ ಬಾಗಿದೆ.
ಗುಡುಗು ತಾಳ ಹಾಕಿದೆ, ಮಿಂಚು ಜೊತೆಗೆ ಕುಣಿದಿದೆ.
ಕಾದು ಕೂತ ಭೂಮಿಗೆ, ಹೊಸ ಕನಸು ಬಂದಿದೆ.

ಮಳೆ ಬಿಡದೆ ಸುರಿದಿದೆ, ತುಸುವು ಬಿಡುವು ನೀಡದೆ,
ನದಿಯು ಉಕ್ಕಿ ಹರಿದಿದೆ, ಗುಡ್ಡ ಬೆಟ್ಟ ಕುಸಿದಿದೆ.
ಮರವು ಧರೆಗೆ ಉರುಳಿದೆ, ಗೂಡು ನೆಲಕೆ ಬಿದ್ದಿದೆ,
ಮನೆಗಳೆಲ್ಲ ಕುಸಿದಿದೆ, ಬದುಕು ಬೀದಿಗೆ ಬಂದಿದೆ.
ರೈತಗೊಂದು ಕನಸಿದೆ, ಅದು ಮಣ್ಣು ಪಾಲಾಗಿದೆ.

ಜಗವು ಮುಂದೆ ಸಾಗಿದೆ, ಯಾರಿಗೂನು ಹೇಳದೆ,
ಬಿದ್ದ ಗೂಡ ಮರೆತಿದೆ, ಹೊಸ ಗೂಡನು ಹುಡುಕಿದೆ,
ಹೊಸ ಸಸಿಯು ಮೊಳೆದಿದೆ, ಮಣ್ಣನಾಸರೆ ಪಡೆದಿದೆ,
ರೈತ ಎದ್ದು ನಿಂತನು, ಟೊಂಕ ಕಟ್ಟಿ ನಿಂತನು,
ಹಳೆಯ ನೋವ ಮರೆತನು, ಹೊಸ ಕನಸು ಕಂಡನು.

ತಂಗಾಳಿ ಲಾಲಿ ಹಾಡಿತು, ಮರವು ತೂಗಿ ಬಾಗಿತು,
ನದಿಯ ನೀರು ಹರಿಯಿತು, ಹೊಲವು ತುಂಬಿ ತೊನೆಯಿತು.
ಹೊಸ ಮಣ್ಣು ಹುಲುಸಾಯಿತು. ಮನ ತುಂಬಿ ಬಂದಿತು.
ಫಸಲು ಮನೆಯ ತುಂಬಿತು, ರೈತನ ಮನ ಹಗುರಾಯಿತು,
ಹೊಸ ಬೆಳಕು ಮೂಡಿದೆ , ಅದು ಬಾಳ ಬೆಳಗಿದೆ.

 ಮರಳಿ ಯತ್ನವ ಮಾಡು, ಜೇಡ ಕಲಿಸಿದ ಪಾಠ,
ಕಾಯಕವೇ ಕೈಲಾಸ, ಇದು ರೈತ ಬದುಕಿದ ಹಾದಿ,
ಆಳಾಗಬಲ್ಲವನು ಅರಸಾಗಬಲ್ಲ, ಇದು ಶ್ರಮಿಕನ ನೀತಿ,
ಕಾಯುವಿಕಿಗಿಂತನ್ಯ ತಪವು ಇಲ್ಲ, ಇದು ಶ್ರೇಷ್ಠ ವಚನ,
ದಾರಿ ಕತ್ತಲಾದರೇನು? ಕನಸಿಲ್ಲವೇ ಬೆಳಕಾಗಿ

ಓಹ್ ಮುಗ್ಧ ಜೀವ, ಮರೆತುಬಿಡು ನೋವ,
ನೀ ನಡೆ ಮುಂದೆ, ಸೋಲ ಬಿಡು ಹಿಂದೆ,
ನಿನ್ನ ಬೆವರ ಹನಿ, ಬೆಳೆಗಾಗಲಿ ಇಬ್ಬನಿ,
ನಿನ್ನ ಎದೆಯ ಹರಕೆ, ಇದೆ ನಮ್ಮ ಹಾರೈಕೆ,
ತಂಪಾಗಿರಲಿ ನಿನ್ನ ಹೆತ್ತು, ಹೊತ್ತ ಭೂಮಿ.

ಮಕ್ಕಳ ಜತೆ

ಮಕ್ಕಳೊಂದಿಗೆ ಮಗುವಾಗಿ,

ಅವರ ನಗುವಿಗೆ ಜೊತೆಯಾಗಿ,

ನೋವಿನಲ್ಲಿ ನೆರಳಾಗಿ,

ಒಲವ ಮಳೆಯ ಸುರಿಸಿ,

ಕನಸು ಬೆಳಕು ದೀಪವಾಗಿ,

ಅವರು ಕಳೆವ ‌ಸಮಯವಾಗಿ.


ಮಾತು ಕೇಳೋ ಜೊತೆಯಾಗಿ 

ಬುದ್ಧಿ ಹೇಳೋ ಗುರುವಾಗಿ

ಸಂತೈಸೋ ಹೆಗಲಾಗಿ,   

ಮಮತೆಯ ಮಡಿಲಾಗಿ

ತಲೆಸವರೋ ತಂದೆಯಾಗಿ

 ದಾರಿ ತೋರೋ ಬೆಳಕಾಗಿ

ಜೊತೆ ಇರುವ ಭರವಸೆಯಾಗಿ,

ನೆರಳು ನೀಡೋ ಮರವಾಗಿ.


ನುಡಿದಂತೆ ನಡೆದು ದಾರಿ ತೋರಿ,

ಸತ್ಯ ಧರ್ಮದ ಪಾಠ ಹೇಳಿ

ನೀತಿ ನಡತೆಯ ಬೆಲೆಯ ತಿಳಿಸಿ

ಹೆಣ್ಣು,ಮಣ್ಣಿಗೆ  ತಲೆಯ ಬಾಗಿ

ಬಾಳುವಂತೆ ಬದುಕು ಕಲಿಸಿ

ಹೆತ್ತವರಾಗಿರಿ ಮಕ್ಕಳೊಂದಿಗೆ,

ಮಕ್ಕಳಾಗಿ ನಿಮ್ಮ ಹೆತ್ತವರೊಂದಿಗೆ....








ಮರೆಯದಿರಿ

ಮರೆಯದಿರಿ ಮರೆಯದಿರಿ 
ಬಾಳಿನಲೆಂದು ಮರೆಯದಿರಿ
ಕಳೆದ ಜೀವನವ ಮರೆಯದಿರಿ.

ಜನುಮ ನೀಡಿದ ಜನುಮ ದಾತೆಯ
ಜ್ಞಾನ ನೀಡಿದ ಜ್ಞಾನ ದೇವಿಯ
ಜೀವನ ನೀಡಿದ ಜನುಮ ಭೂಮಿಯ
ಮರೆಯದಿರಿ ಮರೆಯದಿರಿ.

ಬದುಕು ಕಲಿಸಿದ ಜನುಮದಾತನ
‌ಒಲವು ನೀಡಿದ ನಿಜದಬಂಧುವ,
ಸ್ನೇಹ ತೋರಿದ ಮುಗ್ಧ ಗೆಳೆಯರ
ಮರೆಯದಿರಿ ಮರೆಯದಿರಿ.

ಗುರಿಯ ತೋರಿದ ಪೂಜ್ಯಗುರುವ,
ಬುದ್ಧಿ ಹೇಳಿದ ಹಿರಿಯ ಜೀವವ
ಅನ್ನ ನೀಡಿದ ಅನ್ನದಾತನ
ಮರೆಯದಿರಿ ಮರೆಯದಿರಿ.

ಏರಿದೆತ್ತರದ ಮಜಲಿಂದ,
ಬಿದ್ದ ಆಳದ ಕಮರಿಯಿಂದ 
ಹಿಂತಿರುಗಿ ನೋಡುವ ಪಾಠವೇನು
ಮರೆಯದಿರಿ ಮರೆಯದಿರಿ.

ಬದುಕು ಕಲಿಸಿದ ಪಾಠಗಳ
ಬವಣೆ ತಿಳಿಸಿದ ನೀತಿಗಳ
ಬೆಳಕು ನೀಡುವ ನೆನಪುಗಳ 
ಮರೆಯದಿರಿ ಮರೆಯದಿರಿ.

ಹಸಿದವರಿಗೆ ಅನ್ನ ನೀಡಲು 
ಬಳಲಿದವರಿಗೆ ಆಸರೆಯಾಗಲು
ನೊಂದವರ ಕಣ್ಣೀರು ಒರೆಸಲು 
ಮರೆಯದಿರಿ ಮರೆಯದಿರಿ.

ಏರಿದ ಏಣಿಯ ಮರೆತು 
ಪಟ್ಟ ಪಾಡುಗಳ ತೊರೆದು 
ಸಹಾಯ ಮರೆಯುವ ಅಹಂಕಾರವನು
ಮಾತ್ರ ಮರೆತುಬಿಡಿ.

ಮಣ್ಣ ಹಿಂದೆ ಹೋಗದಿರಿ,
ಮಣ್ಣಾಗಿಯೆ ಹೋಗುವಿರಿ ,
ಹೊನ್ನ ಹಿಂದೆ ಹೋಗದಿರಿ ,
ಕುರುಡಾಗಿಯೆ ಹೋಗುವಿರಿ . 

ಹೆಣ್ಣ ಹಿಂದೆ ಹೋಗದಿರಿ 
ಮರುಳಾಗಿಯೆ ಹೋಗುವಿರಿ 
ಚಿನ್ನದಂತ ಬಾಳನು ,
ಮಣ್ಣಾಗಲು ಬಿಡದಿರಿ  

ಹೆತ್ತವರಿಗೆ ಪ್ರತಿಯಾಡುವ
ಗುರುಗಳನ್ನು ಹೀಗಳೆಯುವ 
ಮಾತೃಭೂಮಿಗೆ ಕುತ್ತುತರುವ
ಧೂರ್ತ ಬುದ್ಧಿಯ ಮರೆತುಬಿಡಿ.

ಏರಿದ ಚಕ್ರ ಇಳಿಯಲೆ ಬೇಕು 
ತಾಳುತ ಬಾಳನು ಬಾಳಲೆ ಬೇಕು 
ಮರೆಯದಿರಿ ಮರೆಯದಿರಿ 
ಕಳೆದ  ಜೀವನವ ಮರೆಯದಿರಿ .



ಬಾಳ ಪಯಣ

ಅಪ್ಪನ ಪ್ರೀತಿಯ ಬೆಚ್ಚಗೆ ನೆರಳಲ್ಲಿ,
ಅಮ್ಮನ ಹುಸಿಮುನಿಸಿನಲ್ಲಿ
ಯಶಸಿನ ಭೃಂಗದ ಬೆನ್ನೇರಿ 
ಕನಸುಗಳ ಹಕ್ಕಿಗೆ ರೆಕ್ಕೆ ಹಚ್ಚುತ್ತಾ 
ಬಾನಾಡಿಯಾಗಿ ತೇಲುತ್ತಿದ್ದವಳು 
ರೆಕ್ಕೆ ಮುರಿದು ಬೀಳಲು ಏನು ಕಾರಣ?

ಜೀವ ವಾಹಿನಿಯಾಗಿ, ಗುಪ್ತಗಾಮಿನಿಯಾಗಿ
ಹರಿಯುತ್ತಿದ್ದ ಪ್ರೀತಿಯ ಸೆಲೆ,
ಇದ್ದಕಿದ್ದಂತೆ ಬತ್ತಿ ಹೋಗಿದೆ; 
ಆಶ್ರಯಿಸಿದ ಕನಸುಗಳ ಗತಿಯೇನು?

ಆಮೆಯಂತೆ ಚಿಪ್ಪಿನೊಳಗೇ ಮುದುರಿಹೋದಳು,
ಆದರೂ ಬಾಡಿದ ಹೂ ವಾಗಲಿಲ್ಲ,
ಬಣ್ಣದ ಚಿಟ್ಟೆಯಾದಳು!
ಗೂಡೊಳಗಿಂದ ಹೊರಬಂದಳು,
ಬದಲಾವಣೆಯ ಜಗದ ನಿಯಮದಂತೆ.

ಕಳೆದುಹೋದ ಪ್ರೀತಿಯ ಸೆಲೆಗಾಗಿ
ಮತ್ತೆ ಕಾದಳು ಶಬರಿಯಂತೆ.
ಸಿಕ್ಕಿತು ಜೀವಸೆಲೆ, ಎದ್ದಿತು ನಗುವಿನಲೆ
ಹೊಸಜೀವಕೆ ಜೀವನವ ನೀಡಿ 
ತಾನು ಮರುಹುಟ್ಟು ಪಡೆದಿವೆ ವೇಳೆ 
ಮತ್ತೆ ಬರಡಾಯಿತೇ ಜೀವಸೆಲೆ?

ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳ
ಕುತಂತ್ರಕ್ಕೆ ಬಲಿಯಾಗಿ,
ನೋವಿನಲೆಯಲ್ಲಿ ತೇಲಿಹೋದಳೇ?
ಭೂಮಿಗೆ ಕುಸಿದವಳನ್ನು,ನ
ಕೈಹಿಡಿದು ಎತ್ತಿದವರಾರು?

ತನಗೆ ತಾನೇ ತಾಯಿಯಾದಳು 
ತನ್ನ ಬೆನ್ನನ್ನು ನೇವರಿಸಿಕೊಂಡಳು
ಕಣ್ಣೀರನ್ನು ಒರೆಸಿಕೊಂಡಳು
ನೋವಲ್ಲೇ ನೇಗಿಲು ಕಲಿತಳು
ಮತ್ತೆ ಎದ್ದು ನಿಂತಳು,
ಮುನ್ನುಗ್ಗುವ ಛಲದಲಿ.

ಅಪ್ಪ ಕಲಿಸಿದ ಸಂಸ್ಕಾರ,
ತಾಯಿ ನೀಡಿದ ಜ್ಞಾನದೀಪ
ಅವಳು ನಂಬಿದ ಸತ್ಯಗಳು 
ಈ ಬದುಕು ಕಲಿಸಿದ ಪಾಠಗಳು
ಅವಳ ಬಾಳನು ಮುನ್ನಡೆಸುತಿವೆ.
ಅವಳು ಬಾಳನು ಮುನ್ನಡೆಸುತಿವೆ...


ಒಲವಿನ ಆಸರೆ

 ಬದುಕಿಗೆಂದು ಬೇಕಿದೆ,ಒಲವಿನೊಂದು ಆಸರೆ,

ತಾನತ್ತರೆ ನೋಯುವ, ನಕ್ಕರೆ ನಲಿಯುವ,

ಅನುಕ್ಷಣವು ಬಯಸುವ, ನೆರಳಂತೆ ಕಾಯುವ,

ಮಾತೆಲ್ಲ ಕಿವಿಯಾಗುವ, ಆಡದೇ ಅರಿಯುವ,

ಆಸರೆಗೆ ಹೆಗಲಾಗುವ ಜೊತೆಯೊಂದು ಬೇಕಿದೆ.


ತಪ್ಪಿದರೆ ತಿದ್ದುವ, ಬಿದ್ದಾಗ ಎತ್ತುವ,

ಕಷ್ಟದಲಿ ಕೈ ಹಿಡಿಯುವ, ನನಗಾಗಿಯೇ ಮಿಡಿಯುವ,

ಹೃದಯವೊಂದು ಬೇಕಿದೆ ಏಳೇಳು ಜನ್ಮಕೂ.

ಕಣ್ಣಮುಂದೆ ಅಪ್ಸರೆಯರು ಸುಳಿದರೂ,

ಕಾಡುವ ಏಕೈಕ ವ್ಯಕ್ತಿ ತಾನಾಗಬೇಕು,

ಇದು ಪ್ರತಿ ಜೀವದ ಕನಸು.


ತನ್ನಂತೆ ನಮ್ಮನ್ನು ಪ್ರೀತಿಸುವ,

ತಾಯಂತೆ ಗೌರವಿಸುವ, ಮಗುವಂತೆ ಲಾಲಿಸುವ ,

ಹೃದಯದಂತೆ ಜೋಪಾನ ಮಾಡುವ,

ನಮಗಾಗಿಯೇ ಮಿಡಿಯುವ, 

ಹಾಲಂತಹ ತಿಳಿಮನಸಿನ,

ಮೃದುಹೃದಯವು ಬೇಕಿದೆ.


ಸ್ವರ್ಗದಾ  ಬಾಗಿಲಲಿ ನಿಂತರೂ,

ಇಂದ್ರ ಚಂದ್ರ ಮುಂದೆಯೇ ಸುಳಿದಾಡಿದರೂ, 

ಪ್ರತಿಕ್ಷಣವೂ ನೀ ಮಾತ್ರ ಕಾಡಬೇಕು.

ಮರೆಯದೆ ಜೊತೆಗಿರಬೇಕು.

ಮರೆತರೂ ಕೋಪಿಸದೆ ಕೈ ಹಿಡಿಯಬೇಕು.


ಬದುಕಿರುವ ಪ್ರತಿಕ್ಷಣವೂ ನಿನ್ನ ಜೊತೆಗಿರಬೇಕು, 

ಬದುಕಿನ ಬಾನಿನಲಿ ನಿನ್ನ ಒಲವಿರಬೇಕು,

ಆ ಒಲವು ಬಾಡದ ಹೂವಾಗಬೇಕು,

ಬಿಸಲ ನಾ ನೋಡದಂತೆ ನೀ ಕಾಯಬೇಕು,

ಕೊನೆಗೆ ನಿನ್ನದೇ ಮಡಿಲಲ್ಲಿ ನಾ ಮಲಗಬೇಕು.

ನಾ ಮಗುವಾಗಬೇಕು, ನಿನ್ನ ಒಲವ ತೀರಿಸಲು

ನಾ ಮಗುವಾಗಬೇಕು, ನಗುವ ಮಗುವಾಗಬೇಕು.









ಇದು ಬದುಕಿನ ವಾಸ್ತವ

ಮನಸಿದೆ ನನಗೆ, ಅದು ಪ್ರೀತಿಗೆ ಬಾಗಿದೆ.
ಕನಸಿದೆ ನನಗೆ, ಅದು ನಿತ್ಯ ಕಾಡಿದೆ.
ಒಲವಿದೆ ನನಗೆ, ಅದು ಆತ್ಮದ ಬಂಧನ.
ಛಲವಿದೆ ನನಗೆ, ಅದು ಸಾಧನೆಗೆ ಸಂಧಾನ.
ಗೆಲುವಿಗೆ ಬೇಕಿದೆ ಪರಮಾತ್ಮನ ಅನುದಾನ.

ಸೋಲಬೇಕಿಲ್ಲ ಪ್ರತಿಬಾರಿಯೂ,
ಕೇಳಬೇಕಿಲ್ಲ ಪ್ರತಿನಿತ್ಯವೂ,
ತಾಳಬೇಕಿಲ್ಲ ಅನುಗಾಲವೂ,
ಹೇಳಬೇಕಿಲ್ಲ ಅನುದಿನವೂ,
ಅನುಸರಿಸಬೇಕಿಲ್ಲ ಅನುಕ್ಷಣವೂ,
ಇದೇನು ಅಹಂಕಾರವಲ್ಲ, ಸ್ವಾಭಿಮಾನ!.

ಆಡಲು ಮಾತಿಲ್ಲ, ಕೇಳಲು ಕಿವಿಯಿಲ್ಲ
ಒಪ್ಪಲು ಮನಸಿಲ್ಲ, ಕಾಣಲು ಕಣ್ಣಿಲ್ಲ,
ಮಿಡಿಯಲು ಹೃದಯವಿಲ್ಲ,
ಅರ್ಥೈಸಲು ಬುದ್ದಿಯಿಲ್ಲ, ಸಂತೈಸಲು ಒಲವಿಲ್ಲ,
ಕಾಯಲು ಕನಸಿಲ್ಲ, ಸಹಿಸಲು ತಾಳ್ಮೆಯೂ ಇಲ್ಲ.

ನಾನೇನು ಕಲ್ಲಲ್ಲ, ಮಿಡಿಯುವ ಮನಸಿದೆ,
ಹೇಳೋದು ಸುಳ್ಳಲ್ಲ, ಆತ್ಮದಾ ಸಾಕ್ಷಿಯಿದೆ,
ಬಾಗೋದು ಪ್ರೀತಿಗೆ, ದರ್ಪಕ್ಕೆ ಅಲ್ಲ.
ನೋಯೋದು ಉಪೇಕ್ಷೆಗೆ, ಉತ್ಪ್ರೇಕ್ಷೆಗಲ್ಲ ,
ಸಂಧಾನ ಬೇಕಿಲ್ಲ, ತುಸು ವ್ಯವಧಾನ ಸಾಕು.

ಮನಸು ಕಹಿಯಾದಾಗ, ನನಗೂ,
ಕೇಳಲು ಕಿವಿ ತೆರೆಯುವುದಿಲ್ಲ,
ಬುದ್ದಿ, ಬುದ್ದಿ ಹೇಳೋದಿಲ್ಲ,
ಬರೀ ಬಾಯಿ ಮಾತಾಡುವುದು,,
ಕೋಪದ ಕೈಯಲ್ಲಿ.

ಮನಸು ತಿಳಿಯಾದಾಗ,
ಎಲ್ಲವೂ ನೇರವಾಗಿಯೇ ಕಾಣುವುದು,
ಸಿಟ್ಟು ಕರಗುವುದು, ಹೃದಯ ಮರುಗುವುದು,
ಇನ್ನು ಬೇಡ ಕೊರಗುವುದು,
ಬದಲಿಸಲಾಗದ ಬದುಕಿಗಾಗಿ,

ನಕ್ಕರೆ ನಗಬೇಕು,  ಅತ್ತರೆ ಅಳಬೇಕು,
ಮಾತಿಲ್ಲದಿರೆ ಮೌನಸಮ್ಮತಿ ಸಾಕು,
ಕೇಳದಿರೆ ಹೇಳದಿರಬೇಕು,
ಕೊಡದಿರೆ ಬೇಡದಿರಬೇಕು, 
ಕೊಟ್ಟರೆ ಸಾಕೆನಬೇಕು,  ಬಿಟ್ಟರೆ ಬೇಡನಬೇಕು.

ಇರುವರೆಗೆ ನಗುತಿರಬೇಕು,
ಬರುವರೆಗೆ ಜೊತೆಗಿರಬೇಕು,
ಮರೆಯಾದರೂ ನೆನಪಿಡಬೇಕು,
ಏಕೆಂದರೆ, ಅರಿತಿರಬೇಕು
ಇದು ಬದುಕಿನ ವಾಸ್ತವ..
ಇದು ಬದುಕಿನ ವಾಸ್ತವ.!
















ಆಸೆಗಳು


ಸೂರ್ಯನಾಗುವಾಸೆಯಿಲ್ಲ ನನಗೆ ,
ಭುವಿಗೆಲ್ಲ ಬೆಳಕು ಬೀರಿದರೇನು ?
ಯಾರೂ ಇಲ್ಲ ಅವನ ಜತೆ ,
ಒಂಟಿ ಅವನು .

ಚಂದ್ರನಾಗುವಾಸೆಯಿಲ್ಲ ನನಗೆ ,
ಜಗಕೆ ತಂಪನೆರೆದರೇನು ?
ಒಲವ ಜಗಕೆ ಹಂಚಿದವನು ,
ಎಲ್ಲಿ ಮರೆಯಾದ ಅವನು ,

ಕಡಲಾಗುವಾಸೆಯಿಲ್ಲ ನನಗೆ
ಮೊರೆವ ತೆರೆಯ ಆಟಕಿಂತ
ಮಿಗಿಲೇನಿದೆಯೆಂದು ಹಾತೊರೆವರೆಲ್ಲ ,
ಅಲ್ಲಿ ಹೊಳೆವ ನೀರು ದಾಹ ನೀಗದಲ್ಲ!

ಬೆಟ್ಟವಾಗುವಾಸೆಯಿಲ್ಲ ನನಗೆ ,
ಎಷ್ಟು ನುಣ್ಣಗಿದೆ ದೂರದಿಂದ ,
ಹತ್ತಿದರೆ ತಿಳಿವುದು ಕಲ್ಲುಮುಳ್ಳಿದೆಯೆಂದು ,
ಉಸಿರಾಡಲು ಕಷ್ಟವೆಂದು.

ದೊಡ್ಡ ದೊಡ್ಡ ಆಸೆಗಳಿಲ್ಲ ,
ಆದರೂ ನಿರಾಶಾವಾದಿಯಲ್ಲ ,
ನನಗಿರುವ ಆಸೆಗಳು ಸಣ್ಣ ಸಣ್ಣದು ,
ಆದರು ಬಣ್ಣಬಣ್ಣದ್ದು .

ವೈಶಾಖದ ಮೊದಲ ಮಳೆಯಾಗುವಾಸೆ ,
ಬೆಂದ ಧರೆಗೆ ತಂಪೆರೆಯುವಾಸೆ ,
ಭೂ ದೇವಿಗೆ ಹಸಿರು ಸೀರೆಯ ತೊಡಿಸುವಾಸೆ ,
ಪ್ರಕೃತಿಪ್ರೇಮಿಯಾಗಿ ಅಲ್ಲೇ ಕಳೆದುಹೋಗುವಾಸೆ .


ಉರಿವ ದೀಪವಾಗುವಾಸೆ ,
ಕುಡಿದ ಎಣ್ಣೆಯ ಋಣವ ತೀರಿಸುವಂತೆ ,
ತಾನುರಿದು ಬೆಳಕಾಗುವಾಸೆ ,
ಜಗ ಮೆಚ್ಚುವಂತೆ .

ಗುಡಿಯ ಹೊರಗಿನ ಮೆಟ್ಟಿಲಾಗುವಾಸೆ .
ಎಲ್ಲ ತುಳಿಯಲಿ , ಪಾಪ ಕಳೆಯಲಿ ,
ಅರಿತ, ಅರಿಯದ ನೋವು ನೀಗಲಿ
ಕರ್ಮ ಕಳೆದು ಮುಕ್ತಿ ದೊರೆಯಲಿ .

ಗಾಳಿಪಟದಂತೆ ಹಾರುವಾಸೆ ,
ಬೇಕಿಲ್ಲ ಯಾರ ಆಣತಿ ,
ಕೇಳಲ್ಲ ಯಾರು ಹೊನ್ನು ,
ಅವರದಲ್ಲ ಈ ಭೂಮಿ .

ನನ್ನ ಆಸೆಗಳು ನಿಜವಾಗುವುದಲ್ಲ ,
ಅದಕೆಂದು ನಾನು ಕಾಯುವುದಿಲ್ಲ .
ಕಾಯಲು ಸಮಯವೂ ಇಲ್ಲ ,
ನನಗೆ ಬೇಜಾರಿಲ್ಲ ..

ಬದುಕು ಕಲಿಸಿದ ಪಾಠಗಳು ,
ದಾರಿದೀಪವಾಗಿ ಬೆಳಕು ಬೀರುತಿವೆ
ನಗಲು ಕಲಿಸಿವೆ ಕಾರಣವಾ ಕೇಳದೆ ,
ವಾಸ್ತವದ ಸತ್ಯವನ್ನು ಅರಗಿಸಿಕೊಂಡು .

ನೆನಪುಗಳು ಜತೆಯಲಿವೆ,
ಕನಸುಗಳು ನಗುತಲಿವೆ
ಕಾಲುಗಳು ನಡೆಯುತಿವೆ ,
ಅರಿತ ಗುರಿಯೆಡೆಗೆ

ವಿದಾಯ

ಎಲ್ಲೆಲ್ಲೋ ಅಲೆದಾಡುತ್ತಿದ್ದ, ಆ ಜೇನುಮನಗಳು

ಒಂದುಗೂಡಿದವು ಈ ಜೇನುಗೂಡಲಿ.

ಭಿನ್ನ ಭಾಷೆಯ, ರೀತಿ ನೀತಿಯ,

ಮುಗ್ದ ಹೃದಯಗಳು ಜತೆಯಾದವು,

ಈ ಜೇನುಮನೆಯಲಿ.


ನಿನ್ನೆಯೆಲ್ಲ ಅಪರಿಚಿತರಂತಿದ್ದ ಅವು

ತೀರಾ ಆತ್ಮೀರಾಗಿವೆ ಇಂದು,

ಗುರುವೆಂಬ ಹೆಜ್ಜೇನು ಬಂದಾಗ 

ಹೆದರಿ ಮೌನವಾಗುವ ಅವು,

ಅವರು ಹೊರಟೊಡನೆ, ಗುಂಯ್ಗುಡುತ್ತವೆ.


ಆಟ ಪಾಠಗಳ ನಡುವೆ ,

ಸ್ನೇಹ ಸಂಬಂಧಗಳ ಬೆಳೆಸಿ,

ಎಲ್ಲದಕು ಕಿವಿಯಾಗುತ ,

ತಮ್ಮಂತರಂಗವನು ಹರಿಬಿಟ್ಟು

ಖುಷಿಖುಷಿಯಾಗಿ ಬದುಕುತ್ತಿವೆ 

ಹೊರ ಪ್ರಪಂಚದ ಪರಿವೆಯಿಲ್ಲದೆ.


ಒಮ್ಮೆ ಗರಿಬಿಚ್ಚಿದ ಹಕ್ಕಿಯಂತೆ ಹಾರಿ,

ಕೆಲವೊಮ್ಮೆ ನೀರಲ್ಲಿ ಬಿದ್ದ ,

ಇರುವೆಯಂತೆ ಒದ್ದಾಡಿ ,

ಮರುದಿನ ಏನಿಲ್ಲವೆಂದು ಮರೆತು

ಹಾಡುವ ಕೋಗಿಲೆಗಳಂತೆ ಇವರು.


ಬಾವನಾಲೋಕದಲ್ಲಿ ಹಾರಾಡುತ್ತಾ, 

ಬಾವಜೀವಿಗಳೂ ಬುದ್ಧಿವಂತರೂ ಆಗಿ  

ಕಾಣುವ ಮೊದ್ದು ಮುದ್ದು ಗಳು.

ತಮ್ಮ ಸಂತಸಕ್ಕೆ ಪಾರವೇ ಇಲ್ಲವೆಂಬಂತೆ,

ಗಗನದಲ್ಲಿ ಹಾರಾಡುತ್ತಿದ್ದ

ಆ ಜೇನು ಮನಗಳು ,

ಚಡಪಡಿಸುತ್ತಿವೆ ನೀರಿನಿಂದ 

ತೆಗೆದ ಮೀನಿನಂತೆ.


ಹೊಸ ಗೂಡ ಹುಡುಕಲು,

ಹಾರಬೇಕಿದೆ ದೂರ,

ಮನಸಾಗಿದೆ ಬಲುಭಾರ.

ಈ ಪುಟ್ಟ ಭೂಮಿಯಲ್ಲಿ,

ಮತ್ತೆ ಸಂಧಿಸುವ ಕನಸಿನೊಂದಿಗೆ,

ಆ ಜೇನು ಮನಗಳು,

ಕೊನೆಗೂ ಹೇಳುತಿವೆ, 

ಕಣ್ಣೀರ ವಿದಾಯ....!

ಅಮ್ಮನಾಗುವುದು ಎಂದರೆ

ಅಮ್ಮನಾಗುವುದಂದರೆ,
ಬರೀ ಮಗಳಿಗೆ ತಾಯಿಯಾಗುವುದಲ್ಲ,
ನನ್ನ ಹೆತ್ತಮ್ಮ ನನ್ನು ನಾನರಿಯುವುದು,
ಅವಳ ಅಂತರಂಗವನು ನಾನುಭವಿ‌ಸುವುದು.

ಅಮ್ಮ ಏಕೆ ‌ಸದಾ ಬಯ್ಯುತ್ತಾಳೆ,
ಸದಾ ಸಿಡುಕುತ್ತಾಳೆ ? ನನ್ನ ಯಕ್ಷಪ್ರಶ್ನೆ
ನನಗೇ ತಿರುಗಿದ ಬಾಣ ವಾಗಿದೆ ,
ಮುದ್ದಿನ ಮಗಳಿಂದ.

ಈಗ ಅರಿವಾಗುತ್ತಿದೆ ಹೆತ್ತಮ್ಮನ ಒಡಲಾಳ,
ಅವಳ ತಳಮಳ.
ಅರಿಯದ ಎಳೆ ಹುಡುಗಿಗೆ ಎಲ್ಲ ವಿವರಿ‌ಸಲಾಗದೆ, 
ಏನೂ ಹೇಳದೆಯೂ ಇರಲಾಗದು.

ಬೆಂಕಿಯ ಮೇಲೆ ಕುಳಿತಂತೆ ಚಡಪಡಿಸುತ್ತಾ,
ಹಣೆಯಲ್ಲಿ ಚಿಂತೆಯ ಗೆರೆ ಮೂಡಿಸುತ್ತಾ,
ಒದ್ದಾಡುವ ಅಮ್ಮ ಕಾಣುತ್ತಾಳೆ
ನನ್ನ ಮುಂದಿನ ಕನ್ನಡಿಯಲ್ಲಿ.

ಅಂದುಕೊಂಡಷ್ಟು ಸುಲಭವಲ್ಲ, 
ಅಂದುಕೊಂಡಂತೆ ಮಕ್ಕಳನ್ನು ಬೆಳೆಸುವುದು,
ತಂತಿ ಯು ಮೇಲೆ ನಡೆದಂತೆ
ಕ್ಷಣ ಮರೆತರೂ ಸೋಲು ಖಚಿತ.

 ವಿದ್ಯೆಯ ಜತೆ  ವಿನಯವನೂ 
ವಿವೇಕದ ಜತೆ  ವಿಧೇಯತೆಯನ್ನೂ,
ಶಿಸ್ತಿನ ಜತೆ ಸಂಸ್ಕಾರವನ್ನೂ,
ನೀತಿಯ ಜತೆ ನಿಯತ್ತನ್ನೂ ಕಲಿ‌ಸಬೇಕಿದೆ.

ಅಡಿಗೆ ಮನೆಯ ಪಾಕದ ಜತೆ,
ಸ‌‌ಹನೆಯ ತೂಕವನ್ನೂ,
ಬುದ್ದಿಯ ಜತೆ ಶುದ್ದಿಯನ್ನೂ
ಅರೆದರೆದು ಕುಡಿಸಬೇಕಿದೆ ಮೂಗು ಹಿಡಿದಾದರೂ. 

ಮುದ್ದಿನ ಮಗಳ ನಾಳೆಗಳು ನಗುತಿರಲು,
ಇಂದು ನಾನು ನಿಷ್ಠುರವಾಗಲೇಬೇಕಿದೆ,
ಅಮ್ಮನ ತತ್ವದಂತೆ , ಅದು ವ್ಯರ್ಥವಾಗುವುದಿಲ್ಲ , ಇದು ಅಮ್ಮನ ನಂಬಿಕೆ .

ಮುಂದೆ ಎಂದಿಗೂ ನಾನು ದೂರುವುದಿಲ್ಲ, 
ನನ್ನ ಹೆತ್ತಮ್ಮನನು, ನನ್ನ ಹೊತ್ತಮ್ಮನನು,
ತೀರಿಸಲೇ ಬೇಕಿದೆ ಅವಳ ಋಣ,
ಮಗಳಿಗೂ ಕಲಿಸಿ ಅವಳ ಗುಣ.

















ಮಾತು ಮುತ್ತು

 "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು".

"ಮಾತೇ ಮುತ್ತು , ಮಾತೇ ಮೃತ್ಯು"
"ಮಾತು ಬಂಗಾರ, ಮೌನ ಬೆಳ್ಳಿ "

ಜೀವಜಗತ್ತಿನ ಮಾತನಾಡುವ ಏಕೈಕ ಜೀವಿ ಮನುಷ್ಯ
ಮಾನವರಾದ ನಮಗಿರುವ ವಿಶೇಷತೆಯೇ ಮಾತು. ನಮ್ಮ ಮನಸನ್ನು, ಭಾವನೆಯನ್ನು ಬೇರೆಯವರ ಮುಂದಿಡುವ ಸುಲಭ ಸಾಧನ ಈ ಮಾತು. ಅದನ್ನು ಯಾವ ರೀತಿ ಉಪಯೋಗಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಒಳ್ಳೆಯವರ ಮಾತು ಮುತ್ತು 

  • ಒಳ್ಳೆಯವರ ಮಾತು ಯಾವಾಗಲೂ ಉತ್ತಮವಾಗಿರುತ್ತದೆ. 
  • ಅವರು ಕಡಿಮೆ ಮಾತನಾಡುತ್ತಾರೆ. ಅದಕ್ಕೆ ಹೆಚ್ಚು ಅರ್ಥವಿರುತ್ತದೆ.
  • ಅವರು ಯಾರನ್ನು ನೋಯಿಸುವುದಿಲ್ಲ. 
  • ಸರಿಯಾಗಿ ಯೋಚಿಸಿ, ಚಿಂತಿಸಿ ನಿಧಾನವಾಗಿ ಮಾತನಾಡುತ್ತಾರೆ.
  • ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದು, ಹಿಂದಿನಿಂದ ಮಾತನಾಡುವುದು ಅವರಿಗೆ ಇಷ್ಟವಾಗುವುದಿಲ್ಲ.
ಕೆಟ್ಟವರ ಮಾತುಗಳು 

  •  ಕೆಟ್ಟವರು ಮಾತು ಶುರು ಮಾಡಿದರೆ ಅದನ್ನು ಕೇಳಲಾಗುವುದಿಲ್ಲ. ಕಿವಿ ಮುಚ್ಚುವ ಎಂದೆನಿಸುತ್ತದೆ.
  • ಇವರು ಯಾವಾಗ ಬಾಯಿ ಮುಚ್ಚುತಾರೆ  ಎಂದು ಕಾಯುವಂತೆ ಆಗುತ್ತದೆ. 
  • ಅವರ ಬಾಯಲ್ಲಿ ಒಳ್ಳೆಯ ಮಾತು ಬರುವುದಿಲ್ಲ. 
  • ಒಂದೋ ಚಾಡಿ ಹೇಳುತ್ತಾರೆ, ಇಲ್ಲ ಯಾರಿಗೋ ಬಯ್ಯುತ್ತಿರುತ್ತಾರೆ , 
  • ಇಲ್ಲ ಬೇಡದ ವಿಚಾರ, ಅವರಿವರ ಮನೇ ಸುದ್ದಿ  ಮಾತನಾಡಿ ಮನೆ ಹಾಳು ಮಾಡುತ್ತಿರುತ್ತಾರೆ. 
  • ಅವರಿಗೆ ಬುದ್ಧಿಯಿಲ್ಲ. ನಮಗೆ ನೆಮ್ಮದಿ ಇಲ್ಲ.
  • ದಿನಾ ಅದೇ ಮಾತು ಕೇಳುತ್ತಿದ್ದರೆ ನಾವು ಅವರಂತೆ ಆಗುತ್ತೇವೆ. 

ಅದಕ್ಕೆ ನಾವು ಯಾವಾಗಲೂ ಉತ್ತಮರ ಸಂಗ ಮಾಡಬೇಕು. ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ಮಾತನ್ನಾಡಿ ನಾವು ನೆಮ್ಮದಿಯಾರೋಣ. ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡೋಣ.








ಮಿಕ್ಕಿ

ಮಿಕ್ಕಿ ಬಿಲ್ಲಿಯ ಮಗ.  ಅವಳು ಎರಡು ಮಕ್ಕಳಲ್ಲಿ ಒಬ್ಬ. ಬೆಕ್ಕುಗಳ ಬಗ್ಗೆ ಹೆಚ್ಚಿನೂ ಗೊತ್ತಿಲ್ಲದ,ಇಷ್ಟವೂ ಇಲ್ಲದ ನಾನು ಅವನ ಬಗ್ಗೆ ಗಮನಹರಿಸಿರಲಿಲ್ಲ. ಕನಿಷ್ಠ ಪಕ್ಷ ಬಿಲ್ಲಿಯ ಮಕ್ಕಳ ಮುಖ ನೋಡಲೂ ಹೋಗಲಿಲ್ಲ. ಹಳೆಯ ಬಾರಿ ನನಗಾದ ಅನುಭವ ಮರಿಗಳ ಮುಖ ನೋಡಲೂ ಇಷ್ಟವಿಲ್ಲದಂತೆ ಮಾಡಿತ್ತು.

ಕಳೆದ ಬಾರಿ ಬಿಲ್ಲಿ ಮರಿ ಇಟ್ಟಾಗ ಬೆಂಚಿನ ಮೇಲೆ ಮರಿಗಳನ್ನು ಇಟ್ಟು ಕುಳಿತಿದ್ದಳು . ಒಂದು ಮರಿ ತಪ್ಪಿ ಕೆಳಗೆ ಬಿದ್ದು ಒದ್ಧಾಡುತಿತ್ತು. ಅದರ ಕೂಗು ಕೇಳಿ ಬಂದ ನಾನು, ಅಯ್ಯೋ ಪಾಪ ಎಂದು ಮರಿಯನ್ನು ಎತ್ತಿ ಬೆಂಚಿನ ಮೇಲೆ ಇಟ್ಟೆ. ಬಿಲ್ಲಿ ಮರಿಯನ್ನು ಮೂಸಿ ನೋಡಿ, ತನ್ನ ಇನ್ನೊಂದು ಮರಿಯ ಜತೆ ಬೇರೆ ಕಡೆ ಹೊರಟು ಹೋದಳು. ಈ ಮರಿ ಜೋರಾಗಿ ಕೂಗುತ್ತಿತ್ತು. ನಾನು ಪುನಃ ಮರಿಯನ್ನು ಎತ್ತಿ ಕೊಂಡು ಹೋಗಿ ಅವಳ ಬಳಿ ಬಿಟ್ಟೆ. ಅವಳು ಮತ್ತೆ ಜಾಗ ಬದಲಾಯಿಸಿದಳು. ನನಗೆ ತಲೆ ಬಿಸಿಯಾಯಿತು. ಬಿದ್ದು ಏಟಾಗಿದ್ದಕ್ಕೋ, ನಾನು ಮುಟ್ಟಿದ್ದಕ್ಕೋ ಬಿಲ್ಲಿ ಮರಿಯನ್ನು ಮೂಸಲೂ ಇಲ್ಲ. ಹಾಲು ಕುಡಿಸಲೂ ಇಲ್ಲ. ಆ ಮರಿ ಸತ್ತೇ ಹೋಯಿತು. ಅದು ನನ್ನನ್ನು ಬಹಳ ಕಾಡಿತು.


ಈ ಸಲ ಏನಾದರಾಗಲಿ ಎಂದು ಆ ಮರಿಗಳ ಮುಖ ನೋಡಲೂ ಹೋಗಲಿಲ್ಲ.ಮರಿಗಳು ಸ್ವಲ್ಪ ದೊಡ್ಡದಾಗಿ, ಮನೆ ತುಂಬಾ ಓಡಾಡಲು ಶುರು ಮಾಡಿದವು. ಊಟಕ್ಕೆ ಕುಳಿತಾಗ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತಿದ್ದವು.ನಾನು ಕಿವಿ ಕೇಳಿದಂತೆ ನಟಿಸುತಿದ್ದೆ. ನೋಡಿಯೂ ನೋಡದಂತೆ ಇರುತ್ತಿದ್ದೆ. ಒಮ್ಮೆ ಊಟ ಮಾಡುತ್ತಿದ್ದಾಗ ನನ್ನ ಹತ್ತಿರ ಕೂತಿದ್ದ ಮಿಕ್ಕಿ ಎದ್ದು ನಿಂತು ನನ್ನ ಕಾಲಿಗೆ ತನ್ನ ಮುಖವನ್ನು ಉಜ್ಜತೊಡಗಿದ. ನಾನು ಅದನ್ನು ದೂರ ಕಳಿಸಿದೆ. ಮತ್ತೆ ಹತ್ತಿರ ಬಂದು ಕುಳಿತು ಮೀಯಾಂ ಎನ್ನುತ್ತ ಮಡಿಲು ಏರಿ ಕುಳಿತಿತು. ಎಷ್ಟೇ ಜೋರು ಮಾಡಿದರೂ ಕೆಳಗೆ ಇಳಿಯಲಿಲ್ಲ. ಆ ನಂತರ ಪ್ರತಿ ದಿನ ಹಾಗೆ ಮಾಡುತಿತ್ತು. ಕೆಳಗೆ ಕುಳಿತರೆ ಸಾಕು, ಓಡಿ ಬಂದು ಮಡಿಲಿನಲ್ಲಿ ಕುಳಿತುಕೊಳ್ಳುತಿತ್ತು. ನನಗೇ ಗೊತ್ತಿಲ್ಲದಂತೆ ಮಿಕ್ಕಿ ನನ್ನ ಮನಸಿಗೆ ಹತ್ತಿರವಾದ. ಅವನಿಗೆ ನನ್ನನ್ನು ಕಂಡರೆ ಇಷ್ಟ, ನನಗೂ ಅ‌ಷ್ಟೇ.

ಅಷ್ಟರಲ್ಲೇ ಮದುವೆ ನಿಶ್ಚಯವಾಯಿತು. ಅವನ ಮತ್ತು ನನ್ನ ಒಡನಾಟ ಹಾಗೆ ಮುಂದುವರೆಯಿತು. ಮದುವೆ ತಯಾರಿಯಲ್ಲಿ ದಿನಗಳುರುಳಿ , ಎಲ್ಲ ಗದ್ದಲ ಮುಗಿಸಿ ಗಂಡನ ಮನೆಗೆ ಹೋದ ಮೇಲೆ, ಅಲ್ಲಿನ ಹೊಸ ವಾತಾವರಣದಲ್ಲಿ ನಾನು ಮಿಕ್ಕಿಯನ್ನು ಮರೆತೇ ಬಿಟ್ಟೆ. ಸ್ವಲ್ಪ ದಿನಗಳ ನಂತರ ಮತ್ತೆ ಮನೆಗೆ ಹೋದಾಗಲೂ ಮಿಕ್ಕಿ ಓಡಿ ಬಂದ. ಮಾಮೂಲಿಗಿಂತ ಹೆಚ್ಚು ನನಗೆ ಅಂಟಿಕೊಂಡ.ಎರಡು ದಿನಗಳ ನಂತರ ತಿರುಗಿ ಹೊರಟಾಗ ಹೊರ ಜಗುಲಿಯಲ್ಲಿ ಕುಳಿತು ನನ್ನನ್ನೇ ನೋಡುತ್ತಿದ್ದ.  ಬೇಸರವಾಯಿತು...

ಮುಂದಿನ ಬಾರಿ ಹೋದಾಗ ಮಿಕ್ಕಿ ಎಲ್ಲೂ ಕಾಣಲಿಲ್ಲ. ಅಮ್ಮನನ್ನು ಕೇಳಿದಾಗ, ನೀನು ಕಳೆದ ಸಾರಿ ಬಂದು ಹೋದ ಮೇಲೆ, ಅವನು ಎಲ್ಲೂ ಕಾಣ್ತಾ ಇಲ್ಲ ಎಂದು ಹೇಳಿದಾಗ ನನ್ನ ಹೃದಯ ಭಾರವಾಯಿತು. ಅವನ ನೆನಪಾದಾಗ ಕಣ್ಣು ತುಂಬಿ ಬರುತ್ತದೆ. ಮಿಸ್ ಯು ಮಿಕ್ಕಿ...!

ಅವಳೀಗ ಹುಡುಗಿಯಲ್ಲ..

ಬಾಲ್ಯದಲ್ಲಿ ‌‌ಹಕ್ಕಿಯಂತೆ ‌ಹಾರಾಡುವ ಹುಡುಗಿ, 
ತಾನು ಬೆಳೆದಂತೆ,
ಆಮೆಯಾಗುವಳು, ಚಿಪ್ಪಿನೊಳಗೇ
ಮುದುರಿಹೋಗುವಳು.
ಮಾತಿನ ಮಲ್ಲಿ, ಮೌನಗೌರಿಯಾಗುವಳು,
ಅದು ತನಗಾಗಿಯೋ, ಹೆತ್ತವರಿಗಾಗಿಯೋ, ಸಮಾಜಕ್ಕಾಗಿಯೋ ಗೊತ್ತಿಲ್ಲ! 

ವಿದ್ಯೆಕಲಿಯುವ,ಜಗವ ನೋಡುವ
ಅವಳಾಸೆಗೆ ನೂರು ಅಡ್ಡಿಗಳು.
ಅವಳು ಎಲ್ಲಿ ಹೋದಳು? ಏಕೆ ಹೋದಳು?
ಏನು ಬೇಗ? ಏಕೆ ತಡ? ನಿತ್ಯ ಪ್ರಶ್ನೋತ್ತರ.
ಅವರೇಕೆ ಹಾಗೆ ಹೇಳಿದರು? 
ಇವರೇಕೆ ‌ಹೀಗೆ ನೋಡಿದರು? 
ಅವಳದ್ದು ಬರೀ ಸ್ವಗತಗಳು.

ಓದು ಮುಗಿಸಿ,ಕೆಲಸ ಹಿಡಿದು 
ಕನಸು ಕಾಣುವ ವೇಳೆಗೆ,
ಮಗಳಿಗೆ .. ಮದುವೆ ಮಾಡುವುದಿಲ್ಲವೇ?
ಕೆಲಸ ಏಕೆ ಹುಡುಗಿಗೆ? ತರಾವರಿ ಪ್ರಶ್ನೆ.
ಪರಿಚಿತರ ಮಹದಾಸೆಯ, ಹೆತ್ತವರ ಒತ್ತಾಸೆಯ
ಮದುವೆ, ಅವಳಿಗೆ ಕೆರೆಗೆ ‌ಹಾರವಾದಂತೆಯೇ?

ಹೊಸ ಮದುವೆಯ ‌ಹೊಸತನ
ಬಾಳುವುದೇ ಬಲುದಿನ?
ಜವಾಬ್ದಾರಿಗಳ ಹೆಗಲಿಗೇರಿಸಿಕೊಂಡು,
ನಿಂದನೆಗಳ ನುಂಗಿಕೊಂಡು,
ಹೊಟ್ಟೆ ಉರಿಗೆ ಮದ್ದೇನು?
ಎಂದು ಯೋಚಿಸಲೂ ಅವಳಿಗೆ 
ಸಮಯವೆಲ್ಲಿದೆ?

ಹೆತ್ತವರ ಹೆಸರುಳಿಸುವ,
ಮನೆಯ ದೀಪವಾಗುವ,
ಮಕ್ಕಳ ತಾಯಿಯಾಗುವ,
ಸಂಬಂಧಗಳ ಉಳಿಸಿಕೊಳ್ಳುವ
ನಿರಂತರ ತಾಕಲಾಟದಲ್ಲಿ,
ಸ್ವಾಭಿಮಾನವ ತೊರೆದು,
ತನ್ನ ತಾನೇ ಮರೆತು,
ಬಾಳ ಬೇಕಿದೆ; ಅವಳೀಗ ಹುಡುಗಿಯಲ್ಲ.

ಒಲಿದರೆ ಹೂವಾಗುವಳು
ತುಳಿದರೆ ಹಾವಾಗುವಳು.
ನೆರಳಾದರೆ ಬಳ್ಳಿಯಾಗುವ ಅವಳು,
ಬಿರುಬಿಸಿಲಲ್ಲಿ ಕಳ್ಳಿಗಿಡವಾಗುವಳು.
ಗದರಿದರೆ ಹೆದರಲು,
ಚುಚ್ಚಿದರೆ ಸಾಯಲು,
ಅವಳೀಗ ಹುಡುಗಿಯಲ್ಲ

ಕುರುಡಾಗಿ ಪಾಲಿಸಲು,
ಮರುಳಾಗಿ ನೆರಳಾಗಲು
ಹೇಳಿದ್ದೆಲ್ಲಾ ನಂಬಲು,
ಅವಳೀಗ ಮೊದ್ದು ಹುಡುಗಿಯಲ್ಲ,
ಬದುಕು ಕಲಿಸಿದ ಪಾಠಗಳು 
ಬದಲಿಸಿವೆ ಅವಳನು.

ಬರಿಯ ನೋಟದಿಂದ,
ಅರಿಯಬಲ್ಲಳು ಅಂತರಾಳ,
ಸುಳ್ಳೆಂದು ಅರಿತರೂ,
ಕೆದಕಿ ತನಗೆ ತಾನೇ, 
ಗಾಯಮಾಡಳು ಮೂರ್ಖಳಂತೆ,
ಅವಳೀಗ ಹುಡುಗಿಯಲ್ಲ.
ಎಳೇ ಹುಡುಗಿಯಲ್ಲ..


ಎಲ್ಲಿದೆ ನೆಮ್ಮದಿ?


ಬದುಕಿಗೆ ನೆಮ್ಮದಿ ಬಹಳ ಮುಖ್ಯ. ಅದನ್ನು ಖರೀದಿಸಲು ಸಾದ್ಯವಿಲ್ಲ. ಹಾಗಾದರೇ ಅದು ಎಲ್ಲಿದೆ?
ಎಷ್ಟು ಹಣವಿದ್ದರೇನು? ತಿನ್ನಲಾಗುವುದಿಲ್ಲ, ಅಲ್ಲವೇ? ಹೊಟ್ಟೆ ಹಸಿದಾಗ ಊಟ ಬೇಕು, ಬಾಯಾರಿದಾಗ ನೀರು ಬೇಕು, ಉಸಿರಾಡಲು ಶುದ್ಧ ಗಾಳಿ ಬೇಕು, ಇವೆಲ್ಲ ಮಾಡಲು ಆರೋಗ್ಯ ಬೇಕು. ಉತ್ತಮ ಆರೋಗ್ಯಕ್ಕಾಗಿ ಏನು ಬೇಕು?

ಮನಸಿಗೆ ನೆಮ್ಮದಿ ಬೇಕು. ಅದು ನೆಮ್ಮದಿಯಾಗಿ ಇದ್ದರೆ ಆರೋಗ್ಯ ಚೆನ್ನಾಗಿ ಇರುತ್ತದೆ. 

ಮನಸನ್ನು ಚೆನ್ನಾಗಿ ಇಟ್ಟುಕೊಳ್ಳಲು 

1.ಕೋಪ ಕಡಿಮೆ ಮಾಡಬೇಕು. ಅದಕ್ಕಾಗಿ
*ದೀರ್ಘವಾಗಿ ಉಸಿರಾಡಿ.
*ಒಂದರಿಂದ ನೂರರವರೆಗೆ ನಿಧಾನವಾಗಿ ಎಣಿಸಿ.
*ಮೌನವಾಗಿ ಕುಳಿತುಕೊಳ್ಳಿ.
*ಕೋಪಕ್ಕೆ ಕಾರಣವೇನೆಂದು ಯೋಚಿಸಿ.
*ಕಾರಣ ಚಿಕ್ಕದೆಂದು ಅರ್ಥವಾದಾಗ ಮನಸು ತಿಳಿಯಾಗುವುದು.
2.ಅತಿಯಾಸೆಯನ್ನು ಬಿಟ್ಟು ಇರುವುದರಲ್ಲಿ ಖುಷಿಯಾಗಿ ಇರಬೇಕು
3.ಇನ್ನೊಬ್ಬರನ್ನು ನೋಡಿ ಹೊಟ್ಟೆಕಿಚ್ಚು ಪಡುವ ಬದಲು ನಾವು ಅವರಿಗೆ ಒಳಿತನ್ನು ಬಯಸಬೇಕು.
4.ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು.
5.ಕಷ್ಟಪಟ್ಟು ದುಡಿಯುವ ಮನಸಿರಬೇಕು.
6.ದೇವರ ಮೇಲೆ ದೃಢವಾದ ನಂಬಿಕೆ, ಭಕ್ತಿ ಇರಬೇಕು.
7.ಸಕಾರಾತ್ಮಕ ಚಿಂತನೆಗಳನ್ನು ಮಾಡಬೇಕು.
8.ಎಲ್ಲರಿಗೂ ಒಳಿತನ್ನು ಬಯಸುವ ಒಳ್ಳೆಯ ಮನಸಿರಬೇಕು.
9.ಬೇರೆಯವರನ್ನು ತನ್ನಂತೆ ಭಾವಿಸಬೇಕು .
10.ತನ್ನವರನ್ನು ಮಾತ್ರವಲ್ಲ ಇತರನ್ನು ಗೌರವಿಸಬೇಕು.
11.ಯಾರಿಗೂ ಕೇಡು ಮಾಡಬೇಡಿ, ಆಗ ಅವರು ನಮಗೆ ತೊಂದರೆ ಕೊಡುತ್ತಾರೆ ಎಂಬ ಭಯವಿರುವುದಿಲ್ಲ.
12.ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮುಂತಾದವು ಮನಸನ್ನು ತಿಳಿಗೊಳಿಸುತ್ತವೆ.
13.ಮಾಡುವ ಕೆಲಸದ ಬಗ್ಗೆ ಮುಂದಾಲೋಚನೆ ಇರಲಿ.
14.ಪ್ರತಿ ಹೆಜ್ಜೆ ಇಡುವ ಮುನ್ನ ಹತ್ತು ಬಾರಿ ಯೋಚಿಸಿ.
15.ಮಾತು ಮುತ್ತಿನಂತಿರಲಿ. ಹಿತವಾಗಿರಲಿ.

ಹೀಗೆ ನಾವು ಒಳ್ಳೆಯ ಮನಸಿನಿಂದ ಯೋಚಿಸಿದರೆ ಎಲ್ಲವೂ ಒಳ್ಳೆಯದಾಗಿ ಕಾಣಿಸುತ್ತದೆ. ನೆಮ್ಮದಿ ತಾನೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಳ್ಳೆಯ ಆರೋಗ್ಯ, ನಿದ್ದೆ ಸಂತೃಪ್ತಿ ನಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.






CBSC ಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...